ದಖನ್ ಟ್ರ್ಯಾಪ್ -		
 	ದಖನ್ ಪ್ರದೇಶದಲ್ಲಿ ವಿಶಾಲವಾಗಿಯೂ ಹಂತಹಂತವಾಗಿಯೂ ಹರಡಿರುವ ಪ್ರಸ್ಥಭೂಮಿ ಬೆಸಾಲ್ಟ್ (ಡೆಕ್ಕನ್ ಟ್ರ್ಯಾಪ್).  ಮಧ್ಯ ಜೀವಿಕಲ್ಪದ ಅಂತ್ಯ ಕಾಲದಲ್ಲಿ ಭೂಮಿಯ ಎಲ್ಲ ಭಾಗಗಳಲ್ಲಿ ಭೂ ಮೇಲ್ಪದರದ ಕ್ಷೋಭೆ ಉಂಟಾಯಿತು.  ಆಗ ಭೂಖಂಡದ ಭಾಗಗಳಲ್ಲಿ ಚಲನೆ, ಪರ್ವತಗಳ ರಚನೆ ಮತ್ತು ಅಗ್ನಿಶಿಲಾ ಚಟುವಟಿಕೆ ಮೊದಲಾದ ಮಾರ್ಪಾಡುಗಳು ಕಂಡುಬಂದವು.  ಅದೇ ವೇಳೆ ಗೊಂಡ್ವಾನಾ ಭೂಪ್ರದೇಶ ಛಿದ್ರವಾಗಿ, ಕೆಲ ಪ್ರದೇಶ ಕುಸಿದು, ಬಹಳಷ್ಟು ಶಿಲಾರಸ ಹೊರಹೊಮ್ಮಿ ದಕ್ಷಿಣ ಮತ್ತು ಪಶ್ಚಿಮ ಭಾರತದ ವಿಶಾಲ ಪ್ರದೇಶವನ್ನು ಆವರಿಸಿತು.  ಭೂಮಿಯ ಮೇಲ್ಪದರದಲ್ಲಿರುವ ಅನೇಕ ಬಿರುಕುಗಳಿಂದ ಈ ಶಿಲಾರಸ ಹರಿದು ಉಕ್ಕಿತು.  ಇದಕ್ಕೆ ಸೀಳು ಅಗ್ನಿಪರ್ವತದ ಹೊರ ಚೆಲ್ಲುವಿಕೆ ಎಂದು ಹೆಸರು.  ಬೆಸಾಲ್ಟ್ ಶಿಲಾ ಸಮೂಹವಿದ್ದು ಮಟ್ಟವಾದ ಮೇಲ್ಭಾಗ ಪ್ರಸ್ಥಭೂಮಿಯ ಲಕ್ಷಣವಿರುವ ಇಂಥ ಪ್ರದೇಶವನ್ನು  ಪ್ರಸ್ಥಭೂಮಿ ಬೆಸಾಲ್ಟ್ ಎಂದು ಕರೆಯುವರು.  ಇಲ್ಲಿಯ ಶಿಲೆಗಳ ಹೊರಸ್ತರಗಳು ಹಂತ ಹಂತವಾಗಿರುವುದರಿಂದ ಇವನ್ನು ಟ್ರ್ಯಾಪ್ ಶಿಲೆಗಳು ಎಂದೂ ಕರೆಯುವುದುಂಟು.  ಮೂಲವಾಗಿ ಸ್ಕಾಂಡಿನೇವಿಯ ದೇಶದ ಭಾಷೆಯಲ್ಲಿ ಟ್ರ್ಯಾಪ್ ಎಂದರೆ ಹಂತ ಎಂದಾಗುವುದು.

ದಕ್ಷಿಣ ಮತ್ತು ಪಶ್ಚಿಮ ಭಾರತದ ವಿಶಾಲವಾದ ಪ್ರದೇಶದಲ್ಲಿ ಡೆಕ್ಕನ್ ಟ್ರ್ಯಾಪ್ ಶಿಲೆಗಳು ಹರಡಿವೆ.  ಸುಮಾರು 3,21,869 ಚ. ಕಿ.ಮೀ.  ವಿಸ್ತೀರ್ಣದ ಡೆಕ್ಕನ್ ಟ್ರ್ಯಾಪ್ ಮುಂಬೈ,  ಕಾಥೇವಾರ್, ಮಧ್ಯಪ್ರದೇಶ, ಮಧ್ಯಭಾರತ, ಡೆಕ್ಕನ್ ಪ್ರದೇಶ, ಬೆಳಗಾವಿ (ಕರ್ನಾಟಕ)  ಮೊದಲಾದ ಮೂಲ ಪ್ರದೇಶಗಳನ್ನು ಒಳಗೊಂಡು ಅಂದ್ರದ ರಾಜಮಹೇಂದ್ರಿ ಸಿಂಧ್ ಮತ್ತು ಬಿಹಾರದ ವರೆಗೆ ಹಬ್ಬಿರಬಹುದೆಂದು ಅಂದಾಜಿಸಲಾಗಿದೆ.  ಡೆಕ್ಕನ್ ಟ್ರ್ಯಾಪ್ ಶಿಲಾ ಸಮೂಹ ಪದರಗಳಲ್ಲಿ ಹರಡಿದೆ.  ಒಮ್ಮೆ ಹೊರಹೊಮ್ಮಿದ, ಶಿಲಾರಸ ಹರಡಿ, ಘನೀಭವಿಸಿದ ಬಳಿಕ ಇನ್ನೊಮ್ಮೆ ಪ್ರವಾಹ ಹೊರಹೊಮ್ಮಿ, ಪಸರಿಸಿ, ಆರಿ ಶಿಲಾಸಮೂಹವನ್ನು ಪದರಪದರಗಳಲ್ಲಿ ಮಾರ್ಪಡಿಸಿತು. ಪದರ ರೂಪುಗೊಂಡ ಮೇಲೆ ಇನ್ನೊಂದು ಪದರ ಹರಿದು ಬರುವುದಕ್ಕೆ ಮುಂಚೆ ಸಾಕಷ್ಟು ಕಾಲವಿದ್ದುದರಿಂದ ಅಲ್ಲಲ್ಲಿ ಸೇರಿದ ಸಿಹಿನೀರಿನ ತಂಗುಗಳಲ್ಲಿ ಮೆಕ್ಕಲು ಕೂಡಿಬಿದ್ದು ಜಲಜಶಿಲೆಗಳು ರೂಪುಗೊಂಡವು.  ಇದನ್ನು ಅಂತರ್ ಟ್ರ್ಯಾಪ್ ಸ್ತರ ಎಂದು ಕರೆಯುವರು.  ಈ ಸ್ತರಗಳಲ್ಲಿ ಜೀವ್ಯಶೇಷಗಳು ಕಂಡುಬಂದಿದ್ದು ಇವು ಡೆಕ್ಕನ್ ಪ್ರದೇಶದಲ್ಲಿ ಅಗ್ನಿಶಿಲಾ ಚಟುವಟಿಕೆಯ ಕಾಲವನ್ನು ನಿರ್ಧರಿಸುವಲ್ಲಿ ಬಹಳಷ್ಟು ಸಹಕಾರಿಯಾಗಿವೆ.  ಅಂತರಟ್ರ್ಯಾಪ್ ಸ್ತರಗಳು ಡೆಕ್ಕನ್ ಶಿಲಾ ಸಮೂಹದ ಮೇಲು ಮತ್ತು ತಲಭಾಗದಲ್ಲಿರುವ ಪದರಗಳ ಮಧ್ಯದಲ್ಲಿವೆ.

ಟ್ರ್ಯಾಪ್ ಶಿಲಾವರ್ಗದ ಬಹುಭಾಗ ಆರ್ಷೇಯಕಲ್ಪದ ಶಿಲಾಪ್ರದೇಶದ ಮೇಲ್ಭಾಗದಲ್ಲಿ ರೂಪುಗೊಂಡಿದೆ.  ಆದರೆ  ಕೆಲವು ಪ್ರದೇಶದಲ್ಲಿ  ಆರ್ಷೇಯ ಕಲ್ಪವಾದ ಮೇಲೆ ರೂಪುಗೊಂಡ ಮತ್ತು ಜಲಜಶಿಲಾಸ್ತರಗಳ ಮೇಲೆ ಹರಡಿರುವ ಇವನ್ನು ಟ್ರ್ಯಾಪ್ ಕೆಳಸ್ತರಗಳು ಎಂದು ಕರೆಯುವರು.  ಕೆಳ ಪ್ರದೇಶದಲ್ಲಿ ಟ್ರ್ಯಾಪ್ ಶಿಲೆಗಳು ರೂಪುಗೊಂಡ ಬಳಿಕ ಅವುಗಳ ಕೆಲವು ಭಾಗಗಳು ಸಮುದ್ರದ ಭಾಗವಾಗಿದ್ದುದರಿಂದ ಅವುಗಳ ಮೇಲೆ ಜಲಜ ಶಿಲೆಗಳು ಸಂಚಯನವಾದವು.  ಇಂಥ ಶಿಲಾಸ್ತರಗಳಿಗ ಟ್ರ್ಯಾಪ್ ಮೇಲುಸ್ತರ ಎಂದು ಕರೆಯುವರು.  ಅಗ್ನಿಶಿಲಾ ಚಟುವಟಿಕೆ  ಕ್ರಿಟೇಶಿಯಸ್ ಯುಗದ ಅಂತ್ಯದಲ್ಲಿ ಪ್ರಾರಂಭವಾಯಿತು.  ಈ ವಿಶಾಲವಾದ ಡೆಕ್ಕನ್ ಪ್ರದೇಶದಲ್ಲಿ ಅಗ್ನಿಶಿಲಾ ಚಟುವಟಿಕೆ ಮೊದಲು ನಾಗಪುರ  ಚಿಂದ್ವಾರ ಪ್ರದೇಶದಲ್ಲಿರುವ ಟ್ರ್ಯಾಸ್ ಶಿಲೆಗಳು ಮೊತ್ತಮೊದಲು ಹರಿದು ಬಂದ ಶಿಲಾರಸದಿಂದ ಆಗಿರಬಹುದೆಂದು ಮತ್ತು ಮುಂಬೈ ಪ್ರದೇಶದ ಮಲಬಾರ್ ಪರ್ವತ, ವರ್ಲಿಯ ಶಿಲಾಪದರಗಳು ಕೊನೆಯಲ್ಲಿ ರೂಪುಗೊಂಡವು ಎಂಬುದನ್ನು ಖಚಿತಗೊಳಿಸಲಾಗಿದೆ.

ಡೆಕ್ಕನ್ ಟ್ರ್ಯಾಪ್ ಶಿಲಾಸಮೂಹವನ್ನು ಕೆಳ, ಮಧ್ಯ ಮತ್ತು ಮೇಲು ಟ್ರ್ಯಾಪ್‍ಗಳೆಂದು ಮೂರು ಭಾಗಗಳನ್ನಾಗಿ ವಿಂಗಡಿಸಲಾಗಿದೆ:

ಮೇಲುಟ್ರ್ಯಾಪ್   .....       ಮುಂಬೈ ಕಾಥೇವಾರ ಪ್ರದೇಶಗಳಲ್ಲಿ               
(455ಮೀ)	   ಹರಡಿದ್ದು ಅನೇಕ ಅಗ್ನಿಪರ್ವತ ಬೂದಿಯ ಪದರಗಳು ಕಂಡುಬಂದಿವೆ.

ಮಧ್ಯ ಟ್ರ್ಯಾಪ್ 	 .....	    ಮಧ್ಯಭಾರತ, ಮಾಲ್ವ ಪ್ರದೇಶಗಳಲ್ಲಿ 
      (1213.33ಮೀ)		ಹರಡಿದ್ದು ಅಗ್ನಿ ಪರ್ವತದ ಬೂದಿಯ ಪದರಗಳು ಕಂಡುಬಂದಿವೆ.

ಕೆಳ ಟ್ರ್ಯಾಪ್	 .....      ಮಧ್ಯ  ಪ್ರದೇಶ, ಪೂರ್ವ ಬಾಗಗಳಲ್ಲಿ ಹರಡಿವೆ.
(166.83ಮೀ)		

ಕೆಳ ಮತ್ತು ಮೇಲು ಟ್ರ್ಯಾಪ್‍ಗಳಲ್ಲಿ ಟ್ರ್ಯಾಪ್ ಅಂತರ ಸ್ತರಗಳಿವೆ.  ಮಧ್ಯ ಟ್ರ್ಯಾಪ್‍ಗಳಲ್ಲಿ ಅವುಗಳಿಲ್ಲ.
ಡೆಕ್ಕನ್ ಟ್ರ್ಯಾಪ್ ಪ್ರದೇಶದಲ್ಲಿ ಅಲ್ಲಲ್ಲಿ ಮಟ್ಟ ಮಟ್ಟವಾದ ಮೇಲ್ಭಾಗವಿರುವ ಪರ್ವತ ಶ್ರೇಣಿಗಳು, ಹಂತಹಂತವಾಗಿರುವ ದಂಡೆಗಳೂ ಇವೆ.  ಕೆಲವು ಪ್ರದೇಶಗಳಲ್ಲಿ ಟ್ರ್ಯಾಪ್ ಶಿಲೆಗಳು ಸ್ತಂಭಾಕೃತಿಯ ಸೀಳು ರಚನೆಯನ್ನು ಪಡೆದಿವೆ.  ಡೆಕ್ಕನ್ ಟ್ರ್ಯಾಪ್ ಪ್ರದೇಶದ ಸುತ್ತಲೂ ಶಿಲಾರಸದ ಹೊರಹೊಮ್ಮಿಕೆಗೆ ಸಂಬಂಧಿಸಿದ ಅನೇಕ ಡೈಕುಗಳು ಮತ್ತು  ಸಿಲ್‍ಗಳು ಇವೆ.  ಡೈಕುಗಳು ಹೇರಳವಾಗಿವೆ.  ಒಂದೇ ಸಮವಾಗಿ ಹರಡಿಲ್ಲ.

ಡೆಕ್ಕನ್ ಟ್ರ್ಯಾಪ್ ಪ್ರದೇಶ, ಎಚ್. ಎಸ್. ವಾಷಿಂಗ್‍ಟನ್ (1922) ಎಂಬಾತ ಪ್ರಸ್ಥಭೂಮಿ ಬೆಸಾಲ್ಟ್ ಎಂದು ಹೆಸರಿಸಿರುವ ಶಿಲಾವಿಧದಿಂದಾಗಿದೆ. ಇಲ್ಲಿರುವ ಶಿಲಾವಿಧಗಳ ಧಾತು ಸಮೂಹ ಈ ವಿಶಾಲ ಪ್ರದೇಶದ ಬಹು ಭಾಗದವರೆಗೆ ಒಂದೇ ಸಮವಾಗಿದೆ. ಅದು ಬೆಸಾಲ್ಟ್ ಅಥವಾ ಡಾಲೆರೈಟನ್ನು ಹೋಲುತ್ತದೆ.  ಈ ಶಿಲೆಗಳ ಬಣ್ಣ ಆಮ್ಲಿತ ವಿಧಗಳಲ್ಲಿ ಕೆನೆ ಮತ್ತು ಬೂದಿ ಬಣ್ಣದ್ದಾಗಿಯೂ ಇತರ ವಿಧಗಳಲ್ಲಿ ಕಪ್ಪು, ಬೂದು ಮತ್ತು ಕಪ್ಪು ಆಮ್ಲಿತ, ಹಸಿರು ಬಣ್ಣದ್ದಾಗಿಯೂ ಇದೆ. ಮುಂಬೈ, ಕಾಥೇವಾರ್, ಕಚ್ಛ್ ಪ್ರದೇಶಗಳಲ್ಲಿ ಆಮ್ಲಿತ, ಮಧ್ಯವರ್ತಿ ಮತ್ತು ಪ್ರತ್ಯಾಮ್ಲಿತ ಶಿಲಾವಿಧಗಳಿವೆ.  ಇವುಗಳಲ್ಲಿ ಲಿಂಬರ್ಗೈಟ್, ಅಂಡೆಸೈಟ್, ಅಬ್ಸಿಡಿಯಾನ್, ಪಿಚ್ ಸ್ಟೋನ್ ಮೊದಲಾದ ಜ್ವಾಲಾಮುಖಿಜ ಶಿಲೆಗಳೂ, ಲ್ಯಾಂಪ್ರೊಫೈರ್, ಪಾರ್ಫೆರೈಟ್, ಗ್ರ್ಯಾನೊಫೈರ್ ಮುಂತಾದ ಮಧ್ಯಾಂತರ ಶಿಲೆಗಳೂ ಇವೆ.

ಡೆಕ್ಕನ್ ಟ್ರ್ಯಾಪ್ ಶಿಲೆಗಳ ಸಾಮಾನ್ಯ ವಿಧಗಳಲ್ಲಿ ಪಾರ್ಫಿರಿಟಿಕ್ ಒಳರಚನೆ ಉಂಟು.  ಇವುಗಳಳ್ಲಿ ನೈಜಗಾಜು ವಿವಿಧ ಪ್ರಮಾಣದಲ್ಲಿದೆ.  ಇಲ್ಲಿಯ ಸಾಮಾನ್ಯವಾದ ಶಿಲಾವಿಧವೆಂದರೆ ಬೆಸಾಲ್ಟ್.  ಇದರಲ್ಲಿ ಮೂರು ವಿಧಗಳಿವೆ:  ಸಾಮಾನ್ಯ ಬೆಸಾಲ್ಟ್, ಮೂರು ದೊಡ್ಡ ಸ್ಫಟಿಕಗಳಿರುವ ವೆಸಾಲ್ಟ್ ಮತ್ತು ಪಿಕ್ರೈಟ್ ಬೆಸಾಲ್ಟ್.  ಈ ಶಿಲೆಗಳಲ್ಲಿ  ಫೈರಾಕ್ಸೀನ್ ಆಲಿವಿನ್, ಮ್ಯಾಗ್ನಟೈಟ್, ಹಿಮಟೈಟ್, ಅಪಟೈಟ್ ಮತ್ತು ಲೂಕಾಕ್ಸಿನ್ ಮೊದಲಾದ ಖನಿಜ ಸಮೂಹ ಉಂಟು.

ಡೆಕ್ಕನ್ ಟ್ರ್ಯಾಪ್ ಶಿಲಾವರ್ಗದ ವಯೋನಿರ್ಧಾರದಲ್ಲಿ ಭೂವಿe್ಞÁನಿಗಳು ಸಾಕಷ್ಟು ಶ್ರಮಿಸಿದ್ದಾರೆ.  ಅಲ್ಲದೆ ಈ  ವಿಚಾರವಾಗಿ ಸಂಶೋಧನೆಯೂ ಚೆನ್ನಾಗಿ ಮುಂದುವರಿದಿದೆ.  ಒಂದು ಶಿಲಾವರ್ಗದ ವಯೋನಿರ್ಧಾರದಲ್ಲಿ ಮುಖ್ಯವಾಗಿ  ಶಿಲಾವರ್ಗದಲ್ಲಿಯ ಜೀವ್ಯವಶೇಷಗಳು ಮತ್ತು ಶಿಲಾವರ್ಗದ ಕೆಳಗಿನ ಮತ್ತು ಮೇಲಿನ ಪದರಗಳು ಸೂಚಿಸುವ ಆಧಾರಗಳು ಇವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.  ಇದರಲ್ಲಿ ಮೊದಲನೆಯದು ಸ್ವಯಮಾಧಾರವೆಂದೂ ಎರಡನೆಯದು ಪರಾಧಾರವೆಂದೂ ಬಗೆಯಲಾಗಿದೆ.  ಶಿಲಾವರ್ಗದ ವಯಸ್ಸನ್ನು ನಿಖರವಾಗಿ ನಿರ್ಧರಿಸುವಲ್ಲಿ ಸ್ವಯಮಾಧಾರಗಳು ಶ್ರೇಷ್ಠವಾಗಿವೆ.  ಆದರೆ ಡೆಕ್ಕನ್ ಟ್ರ್ಯಾಪ್ ಶಿಲಾವರ್ಗ ಜ್ವಾಲಾಮುಖಿಜ ಶಿಲೆಗಳಿಂದಾದ್ದರಿಂದ ಹೆಚ್ಚು ಕಡಿಮೆ ಜೀವ್ಯವಶೇಷರಹಿತವಾಗಿದೆ.  ಕಾರಣ ಈ ಶಿಲಾವರ್ಗದ ವಯೋನಿರ್ಧಾರದಲ್ಲಿ ಪರಾಧಾರಗಳನ್ನೇ ಅವಲಂಬಿಸಬೇಕಾಗಿದೆ.

ಡೆಕ್ಕನ್ ಟ್ರ್ಯಾಪ್ ಶಿಲೆಗಳು ಸಾಮಾನ್ಯವಾಗಿ ಬೆಸಾಲ್ಟ್ ಶಿಲಾವಿಧದಿಂದ ಕೂಡಿವೆ.  ಇವನ್ನು ಕಟ್ಟಡ ನಿರ್ಮಿಸುವಲ್ಲಿ ಉಪಯೋಗಿಸುವರು.  ಇದಲ್ಲದೆ ಪ್ಲೇಜಿಯೋಕ್ಲೇಸ್, ಫೆಲ್‍ಸ್ಟಾರ್, ಪೈರಾಕ್ಸೀನ್ ಆಲಿವಿನ್, ಮ್ಯಾಗ್ನಟೈಟ್, ಹಿಮಟೈಟ್, ಅಪಟೈಟ್, ಮತ್ತು ಲೂಕಾಕ್ಸಿನ್ ಮೊದಲಾದ  ಉಪಯುಕ್ತ ಖನಿಜ ಸಮುದಾಯವಿದೆ. 		
						   (ಜಿ.ಎಸ್.ಎ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ